ಮಾನವಾಪಹರಣ -
ಉದ್ದೇಶಪೂರಿತ ನ್ಯಾಯಬಾಹಿರ ಅಥವಾ ಬಲಾತ್ಕಾರ ಮಾನವ ಅಪಹರಣ (ಅಬ್‍ಡಕ್ಷನ್). ಪ್ರಾಚೀನಕಾಲದಲ್ಲಿ ಮಾನವಾಪಹರಣ ಹೆಚ್ಚಾಗಿದ್ದಂತೆ ತಿಳಿದುಬರುತ್ತದೆ. ಮಾನವ ಬೆಳೆವಣಿಗೆಯ ಇತಿಹಾಸದೊಂದಿಗೆ ಮಾನವಾಪಹರಣದ ಬಗೆಗಿನ ವಿವರಗಳು ಬೆರೆತುಕೊಂಡು ಬಂದಿವೆ. ಕಾಲ, ದೇಶ, ಸನ್ನಿವೇಶಕ್ಕನುಗುಣವಾದ ವಿವಿಧ ಕಾರಣಗಳಿಗಾಗಿ ಮಾನವ ಅಪಹರಣ ನಡೆಯುತ್ತಿತ್ತು. ವಿವಾಹಕ್ಕಾಗಿ ಮಾಡಲಾಗುತ್ತಿದ್ದ ಸ್ತ್ರೀ ಅಪಹರಣದಲ್ಲೂ ಭಯೋತ್ಪಾದನೆಯ ಉದ್ದೇಶವಿರುತ್ತಿತ್ತು. ನಾನಾ ಬಗೆಯ ಮಾನವಾಪಹರಣ ಪ್ರಕರಣಗಳು ಸಾಮಾಜಿಕ ಅವ್ಯವಸ್ಥೆ ಮತ್ತು ಅಸಹಾಯಕತೆಯನ್ನು ಸೂಚಿಸುವುದರ ಜೊತೆಗೆ ಮಾನವೀಯ ಸೌಜನ್ಯಕ್ಕೆ ಭಂಗತರುತ್ತವೆ. ಈ ದೃಷ್ಟಿಯಿಂದ ಎಲ್ಲ ದೇಶಗಳು ಮಾನವಾಪಹರಣವನ್ನು ಘಾತುಕ ಕೃತ್ಯವೆಂದೂ ಅಪರಾಧವೆಂದೂ ಪರಿಗಣಿಸಿವೆ.

ಇಲ್ಲಿ ಮಾನವಾಪಹರಣವನ್ನು ನ್ಯಾಯಶಾಸ್ತ್ರಕ್ಕೆ ಸಂಬಂಧಿಸಿದಂತೆ ವಿವೇಚಿಸಲಾಗಿದೆ. ಮಾನವಾಪರಹರಣದ ನ್ಯಾಯಕ್ಕೆ ಕಲ್ಪನೆಗಳನ್ನು `ಅಪಹರಣ' ಮತ್ತು `ವ್ಯಪಹರಣ-ಬಾಲಾಪಹರಣ' ಎಂಬುದಾಗಿ ಎರಡು ಪದಗಳಲ್ಲಿ ಅಳವಡಿಸಬಹುದು. 
(ನೋಡಿ- ಅಪಹರಣ) 
(ನೋಡಿ- ಬಾಲಾಪಹರಣ)
 1860ರ ಭಾರತ ದಂಡಸಂಹಿತೆಯಲ್ಲಿ `ಅಪಹರಣ' ಮತ್ತು `ವ್ಯಪಹರಣ'ಗಳನ್ನು ವ್ಯಾಖ್ಯಾಯಿಸಲಾಗಿದೆ.
ಪುರುಷರ, ಸ್ತ್ರೀಯರ ಮತ್ತು ಮಕ್ಕಳ ಅಪಹರಣಗಳು ಸಾಮಾನ್ಯವಾಗಿ ಮಾನವಾಪಹರಣದ ಪ್ರಕರಣಗಳಾದರೂ, ಭಾರತ ದಂಡಸಂಹಿತೆಯಲ್ಲಿ ಇದನ್ನು ಅಪಹರಣ ಮತ್ತು ವ್ಯಪಹರಣ ಎಂದು ವಿಶಿಷ್ಟ ರೀತಿಯಲ್ಲಿ ವ್ಯಾಖ್ಯಾಯಿಸಲಾಗಿದೆ. ವಯಸ್ಕ ಸ್ತ್ರೀ, ಪುರುಷರನ್ನು ಅಪಹರಿಸಿ ಭಾರತದ ಗಡಿಯಾಚೆ ಸಾಗಿಸಲಾದ ಅಪಹರಣ ಪ್ರಕರಣಗಳು ಕೂಡ ಬಾಲಾಪಹರಣ-ವ್ಯಪಹರಣ ವ್ಯಾಪ್ತಿಯಲ್ಲಿ ಬರುತ್ತವೆ.
ಭಾರತ ದಂಡಸಂಹಿತೆಯ ಪ್ರಕರಣ 362ರ ಮೇರೆಗೆ, ಒಬ್ಬ ವ್ಯಕ್ತಿಯನ್ನು ಯಾವುದೇ ಸ್ಥಳದಿಂದ ಬಿಟ್ಟು ಹೋಗಲು ಬಲಪ್ರಯೋಗದಿಂದ ಒತ್ತಾಯಿಸುವುದು ಅಥವಾ ವಂಚನೆಯ ವಿಧಾನದಿಂದ ಪ್ರೇರೇಪಿಸಿ ಸ್ಥಳಾಂತರಿಸುವುದು, ಅಪಹರಣ ಇವು ಮಾನವಾಪಹರಣ ಅಪರಾಧದ ಸ್ವರೂಪ ಬದಲಾಗುತ್ತದೆ. ಮಾನವಾಪಹರಣ ಒಂದು ಘೋರ ಅಪರಾಧವಾಗಿದ್ದು ಅಪರಾಧದ ಸ್ವರೂಪ ಬದಲಾಗುತ್ತದೆ. ಮಾನವಾಪಹರಣ ಒಂದು ಘೋರ ಅಪರಾಧವಾಗಿದ್ದು ಅಪರಾಧದ ಸ್ವರೂಪಕ್ಕನುಗುಣವಾಗಿ ದಂಡಗಳನ್ನು ವಿಧಿಸಲಾಗುವುದು. ಒಬ್ಬ ವ್ಯಕ್ತಿಯನ್ನು ಕೊಲೆಮಾಡಲು, ಆಕ್ರಮವಾಗಿ ಬಂಧನದಲ್ಲಿಡಲು, ವಿವಾಹಕ್ಕಾಗಿ ಒತ್ತಾಯಿಸಲು, ವಿಧಿನಿಷಿದ್ಧ ಸಂಭೋಗಕ್ಕೆ ಬಲಾತ್ಕರಿಸಲು, ಗಾಯಗೊಳಿಸಲು, ಅನೈಸರ್ಗಿಕ ಕಾಮಪಿಪಾಸೆಗೆ ಗುರಿಪಡಿಸಲು ಹೀಗೆ ಅನೇಕ ಉದ್ದೇಶಗಳಿಗಾಗಿ ಅಪಹರಣ ನಡೆಯಬಹುದು. ಈ ಬಗೆಯ ವಿವಿಧ ಅಪರಾಧಗಳಿಗೆ ತಕ್ಕಂತೆ ದಂಡಗಳನ್ನು ನಿರ್ದಿಷ್ಟಗೊಳಿಸಿದೆ, ಅಪಹರಿಸಿದ ವ್ಯಕ್ತಿಯನ್ನು ಬಚ್ಚಿಡುವುದು ಮತ್ತು ಬಂಧನದಲ್ಲಿಡುವುದು ಕೂಡ ಅಪರಾಧವಾಗಿದ್ದು ಅದಕ್ಕೂ ತಕ್ಕ ದಂಡನೆಯಿದೆ. ಭಾರತದ ದಂಡಸಂಹಿತೆಯ 362, 364, 366, 367, 368 ಮತ್ತು 369ನೆಯ ಪ್ರಕರಣಗಳಲ್ಲಿ ಈ ಅಪರಾಧಗಳ ಸ್ವರೂಪಗಳನ್ನೂ ಆ ಸಮಬಂಧದಲ್ಲಿ ವಿಧಿಸಬಹುದಾದ ದಂಡಗಳನ್ನೂ ವಿವರಿಸಲಾಗಿದೆ. ಒಟ್ಟಿನಲ್ಲಿ ಭಾರತ ಮತ್ತು ಇತರ ದೇಶಗಳಲ್ಲೂ ಮಾನವಾಪಹರಣ ದಂಡನೀಯ ಅಪರಾಧವಾಗಿದೆ.				
				(ಎಲ್.ಎಸ್.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ